ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ಗ್ರಾ. ಅ. ಪಂ. ರಾ. ಇಲಾಖೆ, ಕರ್ನಾಟಕ ಸರ್ಕಾರ

Back
ನಮ್ಮ ಬಗ್ಗೆ

ದಕ್ಷಿಣ ಕನ್ನಡ ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು (ತುಳು: ಕುಡ್ಲ). ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ (2011ರ ಜನಗಣತಿಯಂತೆ) ಸುಮಾರು 20,89,649 ಆಗಿದ್ದು, ಇದರಲ್ಲಿ ಪುರುಷರು 10,34,714 ಹಾಗೂ ಮಹಿಳೆಯರು 10,54,935.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7 ತಾಲ್ಲೂಕುಗಳಿವೆ. ಅವುಗಳು ಯಾವುದೆಂದರೆ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ ಹಾಗೂ ಕಡಬ. ಇವುಗಳಲ್ಲಿ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳು ಬಹು ಪಾಲು ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಪಶ್ಚಿಮ ಘಟ್ಟದ ಭಾಗಗಳನ್ನು ಒಳಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 223 ಗ್ರಾಮ ಪಂಚಾಯತ್ ಗಳಿವೆ..

ಕೆಲವು ವರ್ಷಗಳ ಹಿಂದೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು. ಆಗಸ್ಟ್ 1997ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎಂದು ಕರೆಯಲಾಗುತ್ತದೆ. “ತುಳು” ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.

 

ಇತಿಹಾಸ

ಕರ್ನಾಟಕ ಸರ್ಕಾರ ಆಗಸ್ಟ್ 1997ರಲ್ಲಿ, ಆಡಳಿತ ದೃಷ್ಟಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಾಗಿ ವಿಂಗಡಿಸಿತು.

ಜನ ನಂಬುಗೆಯಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದಿಂದ ಕರಾವಳಿವರೆಗಿನ ’ಪರಶುರಾಮ ಸೃಷ್ಟಿ’ಯ ಭಾಗವಾಗಿದೆ. ಈ ನಂಬುಗೆಯಂತೆ, ಕ್ಷತ್ರಿಯರನ್ನು ಭೂಲೋಕದಿಂದ ನಿರ್ಮೂಲನ ಮಾಡುವ ಪ್ರತಿಜ್ಙೆ ಕೈಗೊಂಡ ಪರಶುರಾಮನು ಭೂಮಿಯನ್ನು 21 ಬಾರಿ ಸುತ್ತಿ ಸಕಲ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿದ ನಂತರ ತಾನು ನೆಲೆಸಲು ಕ್ಷತ್ರಿಯರು ಕಾಲಿಡದ ಜಾಗವೊಂದನ್ನು ಸೃಷ್ಟಿಸಬಯಸುತ್ತಾನೆ. ಅದರಂತೆ ಪಶ್ಚಿಮ ಘಟ್ಟದ ಶಿಖರವೊಂದರ ಮೇಲೆ ನಿಂತು ರಕ್ತದಿಂದ ಮಲಿನವಾದ ತನ್ನ ಕೊಡಲಿ (ಪರಶು) ಯನ್ನು ಸಮುದ್ರದೆಡೆಗೆ ಎಸೆದಾಗ ಸಮುದ್ರ ರಾಜನು ಕೊಡಲಿ ಬಿದ್ದಲ್ಲಿಯವರೆಗೆ ಹಿಂದೆ ಸರಿದು ಸೃಷ್ಟಿಯಾದ ಭೂ-ಭಾಗವೇ ಈ ಪರಶುರಾಮ ಸೃಷ್ಟಿ. ಬಹುಶಃ ಪಶ್ಚಿಮ ಘಟ್ಟದ ಕೆಳಗಿನ ಭೂ-ಭಾಗದಲ್ಲಿ ಈ ಜಿಲ್ಲೆ ಇರುವುದರಿಂದ ಈ ನಂಬಿಕೆಗೆ ಪುಷ್ಟಿ ಬಂದಿರಬಹುದು.

ಕಸುಬು

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ಸುಮಾರು 150 ಕಿ.ಲೋ ಮೀಟರ್ ಕರಾವಳಿ ಪ್ರದೇಶವನ್ನು ಹೊಂದಿದೆ. ಇಲ್ಲಿನ ಮುಖ್ಯ ಕಸುಬು ಮೀನುಗಾರಿಕೆ. ಇಲ್ಲಿ ಆಳವಾದ ಮೀನುಗಾರಿಕೆಯನ್ನು ಮಾಡುತ್ತಾರೆ.

ಅಡಿಕೆ, ಕಾಳು ಮೆಣಸು, ಭತ್ತ, ಬಾಳೆ, ಮತ್ತು ತೆಂಗು ಇಲ್ಲಿಯ ಮುಖ್ಯ ಬೆಳೆಗಳು.

ಜಿಲ್ಲೆಗಳಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಅಭಿವೃದ್ದಿ ಹೊಂದಿದ ಜಿಲ್ಲೆ. ಮಂಗಳೂರು ನಗರವು ಇಲ್ಲಿಯ ಜಿಲ್ಲಾ ಕೇಂದ್ರವಾಗಿದೆ. ಮಂಗಳೂರು ನಗರವು ತ್ವರಿತ ಗತಿಯಲ್ಲಿ ಅಭಿವೃದ್ದಿ ಹೊಂದುತ್ತಿದೆ. ಬೆಂಗಳೂರಿನ ನಂತರ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು 2ನೇ ಸ್ಥಾನದಲ್ಲಿದೆ.

ಮಂಗಳೂರು ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಬಜಪೆ ಎಂಬಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

ಮಂಗಳೂರು ನಗರದಿಂದ ಸುಮಾರು  11 ಕಿ.ಮೀ ದೂರದಲ್ಲಿಬಂದರು ಇದ್ದು, ಇಡೀ ದೇಶದಲ್ಲಿಯೇ 7 ಬೃಹತ್ ಬಂದರುಗಳಲ್ಲಿ ಮಂಗಳೂರಿನ ಬಂದರು ಕೂಡ ಒಂದು.

ಮಂಗಳೂರು ನಗರದಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎಂಬ 2 ರೈಲ್ವೈ ನಿಲ್ದಾಣವಿದೆ.

 

ಭಾಷೆ

ತುಳು ದಕ್ಷಿಣ ಕನ್ನಡದ ಪ್ರಮುಖ ಭಾಷೆ. ಕನ್ನಡ, ಹವ್ಯಕ ಕನ್ನಡ, ಕುಂದಾಪುರ ಕನ್ನಡ, ಅರೆಭಾಷೆ, ಕೊಂಕಣಿ, ಗೋವಾ ಕೊಂಕಣಿ, ಮತ್ತು ಬ್ಯಾರಿ ಭಾಷೆ ಇಲ್ಲಿನ ಇತರ ಭಾಷೆಗಳು.

ಕಲೆ ಮತ್ತು ಹಬ್ಬಗಳು

ಯಕ್ಷಗಾನ

ಇದೊಂದು ವಿಶಿಷ್ಟ ಹಾಗೂ ವಿಸ್ತಾರವಾದ ನೃತ್ಯ-ನಾಟಕ ಪ್ರದರ್ಶನ. ಯಕ್ಷಗಾನವನ್ನು ನೋಡದೆ ಕರಾವಳಿ ತೀರದ ಪ್ರವಾಸ ಅಪೂರ್ಣವಾಗಿರುತ್ತದೆ. ಇದು ನೃತ್ಯ, ಸಂಗೀತ, ಹಾಡು, ವಿದ್ವತ್ಪೂರ್ಣ ಸಂಭಾಷಣೆ ಮತ್ತು ವರ್ಣರಂಜಿತ ವೇಷ-ಭೂಷಣಗಳ ಅಪರೂಪದ ನಾಟಕ ಪ್ರದರ್ಶನವಾಗಿದೆ. ಜೋರಾಗಿ ಹಾಡುವುದು ಮತ್ತು ಚೆಂಡ-ಮದ್ದಳೆ ಹೊಡೆಯುವ ವೇಷಭೂಷಣಗಳನ್ನು ಧರಿಸಿದ ನರ್ತಕರಿಗೆ ಹಿನ್ನೆಲೆಯಾಗಿರುವುದರಿಂದ ವಿಶೇಷ ನೃತ್ಯ ಪ್ರಕಾರದ ಜಗತ್ತೊಂದು ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ. ಆದ್ದರಿಂದ ಯಕ್ಷ (ಆಕಾಶ) ಗಾನ(ಸಂಗೀತ) ಎಂಬ ಹೆಸರು ಬಂದಿದೆ. ಇದು ರಾತ್ರಿಯಿಡೀ ನಡೆಯುವ ಘಟನೆಯಾಗಿದ್ದು, ತೆರೆದ ಗಾಳಿ ಚಿತ್ರಮಂದಿರಗಳಲ್ಲಿ ಚೆಂಡೆ-ಮದ್ದಳೆ  ಹೊಡೆತಕ್ಕೆ ವಿಸ್ತಾರವಾಗಿ ಅಲಂಕರಿಸಿದ ಪ್ರದರ್ಶಕರು ನೃತ್ಯ ಮಾಡುತ್ತಾರೆ. ಸಾಮಾನ್ಯವಾಗಿ ಚಳಿಗಾಲದ ಬೆಳೆ ಕೊಯ್ಲು ಮಾಡಿದ ನಂತರ ಹಳ್ಳಿಯ ಭತ್ತದ ಗದ್ದೆಗಳಲ್ಲಿ. ಸಾಂಪ್ರದಾಯಿಕವಾಗಿ, ಪುರುಷರು ಸ್ತ್ರೀಯರು ಸೇರಿದಂತೆ ಎಲ್ಲಾ ಪಾತ್ರಗಳನ್ನು ಚಿತ್ರಿಸುತ್ತಾರೆ. ವಿಶೇಷವಾಗಿ ಮಹಿಳೆಯರು ಕೂಡ ಈಗ ಯಕ್ಷಗಾನ ತಂಡಗಳ ಭಾಗವಾಗಿದ್ದಾರೆ.

 

ಹುಲಿ ವೇಷ

ಹುಲಿವೇಷ ಅಥವಾ ಟೈಗರ್ ಫೇಸ್ ಡ್ಯಾನ್ಸ್ ಎಂದೇ ಕರೆಯಲ್ಪಡುವ ಈ ನೃತ್ಯವು ಕರಾವಳಿ ಕರ್ನಾಟಕಕ್ಕೆ ವಿಶಿಷ್ಟವಾದ ನೃತ್ಯ ಪ್ರಕಾರವಾಗಿದೆ. ಇದನ್ನು ಹೆಚ್ಚಾಗಿ ನವರಾತ್ರಿಯ ಹಬ್ಬಗಳಲ್ಲಿ ಅಂದರೆ ಅಕ್ಟೋಬರ್ ತಿಂಗಳಲ್ಲಿ ಬರುವ 9 ದಿನದ ಹಬ್ಬದಲ್ಲಿ ಸ್ಥಳೀಯ ಯುವಕರು ಹುಲಿ ವೇಷವನ್ನು ಹಾಕಿಕೊಂಡು ನರ್ತನವನ್ನು ಮಾಡುತ್ತಾರೆ.

 

ನಾಗಮಂಡಲ

ಡಕ್ಕೆಬಲಿ ದಕ್ಷಿಣ  ಕನ್ನಡದ ಕರಾವಳಿಯಲ್ಲಿ ಉಳಿದು ಬಂದಿರುವ ಅತ್ಯಂತ ಸುಂದರ ಕಲಾತ್ಮಕ ನೃತ್ಯಾಚರಣೆಯಲ್ಲಿ ಒಂದು. ಕ್ರಿ.ಶ 1458ರಲ್ಲಿ ಬಾರಕೂರಿನ ಶಾಸನದಲ್ಲಿ ಡಕ್ಕೆಬಲಿಯ ಪ್ರಸ್ತಾಪ ಬರುತ್ತದೆ. 13ನೇ ಶತಮಾನಕ್ಕೆ ಅನ್ವಯಿಸುವ ನಾಗಮಂಡಲದ ಶಿಲ್ಪವೊಂದು ನಂದಳಿಕೆಯಲ್ಲಿ ದೊರೆತಿದೆ. ಕ್ರಿ.ಶ 1402ರ ಬಾರಕೂರಿನ ಶಾಸನದಲ್ಲಿ "ಮಂಡಲ ಭಂಡಾರಿ" ಎಂಬ ಪದ ಬಳಕೆಯಾಗಿದೆ.
ನಾಗಮಂಡಲದ ಚಿತ್ರಕ್ಕೂ, ನಾಗಪಾತ್ರಿಯಲ್ಲಿ ಆವಾಹನೆಗೊಳ್ಳುವ "ಯಕ್ಷಿಗೂ" ಮಾಂತ್ರಿಕ-ತಾಂತ್ರಿಕ ಸಂಬಂಧವಿರಬೇಕು. ಈ ವಿಧಿಯಲ್ಲಿ ಬರೆವ ಚಿತ್ರ (ಮಂಡಲ) ದಲ್ಲಿ ನಾಗಯಕ್ಷಿ, ಬ್ರಹ್ಮಯಕ್ಷಿ, ತ್ರಿಶೂಲ, ಗಣಪತಿ, ನಾಗ ಎನ್ನುತ್ತಾರೆ. ಪಾತ್ರಿಯ ಮೈದುಂಬುವುದು ನಾಗಯಕ್ಷಿಯೇ ಹೊರತು ನಾಗನಲ್ಲವೆಂದು ಹೇಳುತ್ತಾರೆ. ತ್ರಿಕೋನವನ್ನು ಮೇಲು ಕೆಳಗೆ ಮಾಡಿ ಜೋಡಿಸಿದಾಗ ತಾಂತ್ರಿಕ ರೂಪ ಪಡೆದುಕೊಳ್ಳುತ್ತದೆ. ತಾಂತ್ರಿಕರು ಇದನ್ನು "ಶ್ರೀ ಚಕ್ರ" ಎಂದು ಕರೆದದ್ದು. ಇದು ಹೆಣ್ಣು-ಗಂಡಿನ ಮಿಲನದ ಸಂಕೇತ. ಇದಕ್ಕೆ ನಾಗಮಂಡಲದ ಸಂದರ್ಭದಲ್ಲಿ ಗಣೇಶ ಎಂದು ಕರೆಯುತ್ತಾರೆ. ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಂತಿಯ ಚಿತ್ರವನ್ನು "ಬ್ರಹ್ಮಯಕ್ಷ" ಎಂದು ಕರೆಯುತ್ತಾರೆ. ಈ ಬ್ರಹ್ಮವೈದಿಕ ಚತುರ್ಮುಖ ಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮೆರ್ - ಇದನ್ನು ಸಂತಾನದ ಅಧಿದೇವತೆ ಎಂದು ಹೇಳುತ್ತಾರೆ. ನಾಗನ ಹೆಡೆಯನ್ನು ಹೋಲುವ ಆಕೃತಿಯನ್ನು ಹಳದಿ ಬಿಳಿ ಬಣ್ಣದಲ್ಲಿ ರೇಖಿಸಲಾಗುವುದು. ಅದನ್ನು ಯಕ್ಷಿ ಎನ್ನುತ್ತಾರೆ. ಈ ಆಚರಣೆಯಲ್ಲಿ ಯಕ್ಷ ಸಂಕೇತವನ್ನು ಆರ್ಯ-ದ್ರಾವಿಡರ ನಡುವಣ ಆತ್ಮೀಯತೆಯ ಬೆಸುಗೆ ಏರ್ಪಟ್ಟ ಸಂಕೇತವಾಗಿರುತ್ತದೆ. ನಾಗರಹಾವಿನ ಚಿತ್ರವನ್ನು ನಾಗಯಕ್ಷ ಎನ್ನುತ್ತಾರೆ. ಇದನ್ನು "ಪುರುಷ" ಸೂಚಕವಾಗಿಯೂ ತ್ರಿಶೂಲ "ಶೈವ" ಸೂಚಕವಾಗಿ ಗುರುತಿಸುತ್ತಾರೆ.

ನಾಗಮಂಡಲದಲ್ಲಿ ವೈದ್ಯ ಅರ್ಧನಾರಿಯ ವೇಷವನ್ನು ತೊಡುತ್ತಾರೆ. ಈ ಸ್ತ್ರೀವೇಷವು ಕೆಂಪು ಬಣ್ಣದ ಚೌಕುಳಿ ಸೀರೆ, ಕಾಲಿಗೆ ಪಾಡಗ (ಗೆಜ್ಜೆ), ಎದೆಗೆ ತೋಳಿಲ್ಲದ ರವಿಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು ಅದರ ಸುತ್ತ ಜರಿರುಮಾಲು ಅದರ ತುದಿಗೆ ಕೋರೆ ಬಂಗಾರ ಇದಿಷ್ಟು ಅರ್ಧನಾರಿಯ ವೇಷಭೂಷಣ. ನಾಗಯಕ್ಷನನ್ನು ತನ್ನಲ್ಲಿ ಅವಾಹಿಸಿಕೊಳ್ಳುವ ಪಾತ್ರಿಗೆ ವಿಶೇಷ ವೇಷಭೂಷಣಗಳಿಲ್ಲ. ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ತಲೆಕೂದಲು ಕುಣಿತಕ್ಕೆ ಭಯಾನಕತೆಯನ್ನೂ ರೌದ್ರತೆಯನ್ನೂ ತುಂಬಿಕೊಡುತ್ತದೆ. ತೆಕ್ಕೆ ತುಂಬ ಒತ್ತಿಕೊಂಡಿರುವ ಹಿಂಗಾರದ ಹೂಗಳನ್ನು ಮುಖಕ್ಕೆ ಆಗಿಂದಾಗ್ಗೆ ತುರುಬಿಕೊಂಡು, ಅದರ ಕಾಳುಗಳು ಮುಖದಲ್ಲಿ ಒತ್ತೊತ್ತಾಗಿ ಅಂಟಿಕೊಂಡು ನಾಗನ ರೂಪ ತೋರುತ್ತದೆ. ನಾಗಪಾತ್ರಿ ರಂಗೋಲಿಯ ನಾಗನನ್ನು ಪ್ರತಿನಿಧಿಸಿದರೆ, ಅರ್ಧನಾರಿವೇಷ ತೊಟ್ಟ ವೈಧ್ಯ ರಂಗೋಲಿಯು ಗಣಪತಿಯನ್ನು (ಶ್ರೀ ಚಕ್ರ) ಪ್ರತಿನಿಧಿಸುತ್ತಾರೆ. ನಾಗಮಂಡಲಗಳು ಫಲವಂತಿಕೆಯ ಕ್ರಿಯೆಯಾಗಿದ್ದ ಮೂಲತಃ ಸ್ತ್ರೀಯೇ ಎಲ್ಲಾ ಆರಾಧನಾ ವಿಧಿಯಲ್ಲಿ ಪಾಲ್ಗೊಳ್ಳುತ್ತಾಳೆ. ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ ನೆಲೆಗೊಳ್ಳುತ್ತಾ ಮಹಿಳೆಯರ ಕಾರ್ಯ ಪುರುಷರಿಗೆ ವರ್ಗಾವಣೆಗೊಂಡು ಹೋಯಿತು. ಆದರೂ ಅವರು ಪುರುಷರಾಗಿ ಈ ಆರಾಧನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಸ್ತ್ರೀವೇಷ ಧರಿಸಿ ಮಾತ್ರ ಆರಾಧನೆ ವಿಧಿಯಲ್ಲಿ ಪಾಲ್ಗೊಳ್ಳಬಹುದು.

ಕಂಬಳ

ನೂರಾರು ವರ್ಷಗಳ ಇತಿಹಾಸವಿರುವ, ರಾಜ ಮಹರಾಜರ ಪ್ರೋತ್ಸಾಹದಿಂದ ಬೆಳದು ಬಂದ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಕಂಬಳ. ಭತ್ತದ ಮೊದಲ ಕೋಯ್ಲಿನ ನಂತರ ಕರಾವಳಿ ರೈತಾಪಿ ವರ್ಗ ಮನರಂಜನೆಗಾಗಿ ಕಂಬಳವನ್ನು ಏರ್ಪಡಿಸುತ್ತಾರೆ. ಈ ಕ್ರೀಡೆಯಲ್ಲಿ ಸ್ಪರ್ಧಿಸುವುದು, ಸ್ಪರ್ಧೆಯಲ್ಲಿ ಜಯ ಸಾಧಿಸುವುದು ಈಗ ಪ್ರತಿಷ್ಠೆಯಾಗಿದೆ. ಮೊದಲೆಲ್ಲ ಈ ಕ್ರೀಡೆಯಲ್ಲಿ ಜಯಶಾಲಿಯಾದವರಿಗೆ ಬೆಳೆಗಳನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಇತ್ತೀಚೆಗೆ ಬಂಗಾರ, ಬೆಳ್ಳಿ, ನಗದನ್ನು ಬಹುಮಾನವಾಗಿ ನೀಡಲಾಗುತ್ತಿದೆ.

ಕೋಣಗಳ ಓಟದ ಸ್ಪರ್ಧೆ

ದಕ್ಷಿಣ ಕನ್ನಡದಲ್ಲಿ ಉಳುಮೆಗಾಗಿ ಕೋಣಗಳನ್ನ ಬಳಸುವುದು ಸಾಮಾನ್ಯ. ಭತ್ತದ ಮೊದಲ ಕೋಯ್ಲಿನ ನಂತರ ಬಲಿಷ್ಠವಾದ ಕೋಣಗಳ ನಡುವೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಇವುಗಳ ಜೊತೆಗೆ ಕೋಣಗಳನ್ನು ಓಡಿಸುವ ವ್ಯಕ್ತಿಯೂ ಮುಖ್ಯ ಪಾತ್ರವಹಿಸುತ್ತಾನೆ. ಭತ್ತದ ಕೋಯ್ಲಿನ ನಂತರ ಉಪಯೋಗಿಸದೆ ಬಿಟ್ಟ ಗದ್ದೆಗಳಲ್ಲಿ ಕಂಬಳ ನಡೆಸಲಾಗುತ್ತಿತ್ತು. ನಂತರ ಕಂಬಳಕ್ಕಾಗಿಯೇ ಸ್ಥಳ ಮೀಸಲಿರಿಸಿ ಕಣವನ್ನು ನಿರ್ಮಿಸಲಾಗಿದೆ. ನವೆಂಬರ್ ಡಿಸೆಂಬರ್ ನಂತರ ಚಳಿಗಾಲದಲ್ಲಿ ಆರಂಭವಾಗುವ ಕಂಬಳದ ಸ್ಪರ್ಧೆಗಳು ಫೆಬ್ರವರಿ ಮಾರ್ಚ್‍ನಲ್ಲಿ ಅಂತ್ಯವಾಗುತ್ತವೆ. 

ದೈವರಾಧನೆ (ಕೋಲ)

ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧನೆ ಇದಾಗಿದೆ. ಪಾಡ್ಡನಗಳು ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ಕಥನಕವನಗಳು. ಪಾಡ್ಡನವನ್ನು ತುಳುವರು ಪಾರ್ತನೋ, ಸಂದ್, ಸಂಧಿ, ಹೀಗೆ ಬೇರೆ ಬೇರೆ ರೂಪದಲ್ಲಿ ಬಳಕೆ ಮಾಡುತ್ತಾರೆ.

×
ABOUT DULT ORGANISATIONAL STRUCTURE PROJECTS